06/05/2026 3:11 PM Total Views: 116530

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಗಂಗಾವತಿ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ: 8 ವರ್ಷಗಳ ಶಾಮೀದ್ ಮನಿಯಾರ್ ‘ದರ್ಬಾರ್’ಗೆ ಬ್ರೇಕ್;
ನಗರ ಬ್ಲಾಕ್ ಕಾಂಗ್ರೆಸ್ ನೂತನ ಸಾರಥಿಯಾಗಿ ನಾಗರಾಜ್ ನಂದಾಪುರ ಆಯ್ಕೆ
ಗಂಗಾವತಿ: ಕೊಪ್ಪಳ ಜಿಲ್ಲೆಯ ರಾಜಕೀಯದ ಕೇಂದ್ರಬಿಂದುವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಶಾಮೀದ್ ಮನಿಯಾರ್ ಅವರ ಸುದೀರ್ಘ ಅವಧಿಗೆ ಈಗ ತೆರೆ ಬಿದ್ದಿದ್ದು, ನೂತನ ಅಧ್ಯಕ್ಷರಾಗಿ ಶ್ರೀ ನಾಗರಾಜ್ ನಂದಾಪುರ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನಾಗರಾಜ್ ನಂದಾಪುರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದ್ದು, ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
ಗಂಗಾವತಿ ನಗರ ಕಾಂಗ್ರೆಸ್‌ನಲ್ಲಿ ಕಳೆದ ಎಂಟು ವರ್ಷಗಳಿಂದ ಶಾಮೀದ್ ಮನಿಯಾರ್ ಅವರದ್ದೇ ಪಾರುಪತ್ಯವಿತ್ತು. ಆದರೆ, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಚುರುಕುಗೊಳಿಸುವ ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ನಾಗರಾಜ್ ನಂದಾಪುರ ಅವರು ಸ್ಥಳೀಯ ನಾಯಕರ ಸಹಯೋಗದೊಂದಿಗೆ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಪಕ್ಷದ ಜವಾಬ್ದಾರಿಯನ್ನು ಹೊರಲಿದ್ದಾರೆ.

ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಾಗರಾಜ್ ನಂದಾಪುರ ಅವರಿಗೆ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ನಗರದ ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಹುರುಪು ಮೂಡಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.












