10/09/2026 10:03 AM Total Views: 141253

💥 ಮುಂದಿನ ನಗರಸಭೆ, ಪಂಚಾಯತ್ ಚುನಾವಣೆಯಲ್ಲಿ ಪ್ರತ್ಯೇಕ ಕಣ!
💥 ಸ್ವತಂತ್ರ ಸತ್ವ: ಕಾಂಗ್ರೆಸ್ ಅಧಿಕೃತ ಬ್ಯಾನರ್ ಇಲ್ಲದೆಯೂ ತಮ್ಮ ಮತಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅನ್ಸಾರಿ ಪಡೆಗಿದೆ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಕೊಪ್ಪಳ ಕಾಂಗ್ರೆಸ್‌ನಲ್ಲಿ ‘ಅನ್ಸಾರಿ’ ಬಣದ ಹೊಸ ಸಂಚಲನ: ಮಲ್ಲಿಕಾರ್ಜುನ ನಾಗಪ್ಪ ಸಾರಥ್ಯಕ್ಕೆ ‘ಅಖಂಡ’ ಬಂಡಾಯದ ಭೀತಿ!
ವಿಶೇಷ ರಾಜಕೀಯ ವರದಿ : ಗೌಸ್ ದಫೇದಾರ್ ಗಂಗಾವತಿ
ಕೊಪ್ಪಳ : ಜಿಲ್ಲಾ ಕಾಂಗ್ರೆಸ್ ನಾಯಕತ್ವದ ಚುಕ್ಕಾಣಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಸಿಗುತ್ತಿದ್ದಂತೆ, ಜಿಲ್ಲಾ ರಾಜಕಾರಣದಲ್ಲಿ ಮತ್ತೊಮ್ಮೆ ಭಿನ್ನಮತದ ಬೇಹುಗಾರಿಕೆ ಮುನ್ನೆಲೆಗೆ ಬಂದಿದೆ. ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷದ ಪ್ರಮುಖ ನಿರ್ಧಾರಗಳಿಂದ ಕಡೆಗಣಿಸುತ್ತಿರುವುದು ಮುಂದಿನ ಸ್ಥಳೀಯ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.
ಅನ್ಸಾರಿ ಎಂಬ ‘ಏಕಾಂಗಿ ವೀರ’: ಮತಬ್ಯಾಂಕ್‌ನ ಅಸಲಿ ಪವರ್
ಜಿಲ್ಲೆಯ ರಾಜಕೀಯ ಇತಿಹಾಸವನ್ನು ತಿರುಗಿಸಿ ನೋಡಿದರೆ, ಅನ್ಸಾರಿ ಎಲ್ಲಿರುತ್ತಾರೋ ಅಲ್ಲಿ ಅವರ ಕಟ್ಟಾ ಬೆಂಬಲಿಗರು ಮತ್ತು ಗಟ್ಟಿಯಾದ ಮತಬ್ಯಾಂಕ್ ಇರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಭದ್ರಕೋಟೆಯನ್ನು ಹಿಂದೆ ಛಿದ್ರಗೊಳಿಸಿ, ತಮ್ಮದೇ ಆದ ರಾಜಕೀಯ ಚಾಣಾಕ್ಷತನದಿಂದ ಅಧಿಕಾರದ ಪೀಠಕ್ಕೇರಿದ್ದ ಅನ್ಸಾರಿ ಅವರ ಜನಾಕರ್ಷಣೆ ಇಂದಿಗೂ ಕಡಿಮೆಯಾಗಿಲ್ಲ.
ಒಂದೆಡೆ ಶ್ರೀನಾಥ್, ಮಲ್ಲಿಕಾರ್ಜುನ ನಾಗಪ್ಪ, ಶಿವರಾಜ್ ತಂಗಡಗಿ ಹಾಗೂ ಹಿಟ್ನಾಳ್ ಸಹೋದರರಂತಹ ಪ್ರಭಾವಿ ನಾಯಕರ ದಂಡೇ ಒಂದಾಗಿದ್ದರೆ, ಇನ್ನೊಂದೆಡೆ ಇಕ್ಬಾಲ್ ಅನ್ಸಾರಿ ಅವರು ಒಬ್ಬಂಟಿಯಾಗಿ ನಿಂತು ತಮ್ಮ ಅಸ್ತಿತ್ವ ಪ್ರದರ್ಶಿಸಲು ಸಜ್ಜಾಗಿದ್ದಾರೆ.
2007 ರ ಇತಿಹಾಸ ಮರುಕಳಿಸುತ್ತಾ?
ಹಿಂದಿನ ಇತಿಹಾಸವನ್ನು ಒಮ್ಮೆ ಮೆಲಕು ಹಾಕಿದರೆ, 2007ರ ನಗರಸಭೆ ಚುನಾವಣೆಯಲ್ಲಿಯೂ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಶ್ರೀನಾಥ್ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿತ್ತು. ಅಂದು ಸಂಘಟನಾತ್ಮಕ ವೈಫಲ್ಯದಿಂದ ಅನುಭವಿಸಿದ ಸೋಲು, ಇಂದು ಮತ್ತೆ ಇತಿಹಾಸವಾಗಿ ಮರುಕಳಿಸುವ ಮುನ್ಸೂಚನೆ ಸಿಗುತ್ತಿದೆ. ನಾಯಕರ ಮೇಲಿನ ಅಸಮಾಧಾನ ಮತ್ತು ಹಿರಿಯರನ್ನು ಅಲಕ್ಷಿಸುತ್ತಿರುವ ಶೈಲಿ ಕಾರ್ಯಕರ್ತರ ಪಡೆಗೆ ತೀವ್ರ ನಿರಾಶೆ ತಂದೊಡ್ಡಿದೆ.
ಮುಂದಿನ ನಗರಸಭೆ, ಪಂಚಾಯತ್ ಚುನಾವಣೆಯಲ್ಲಿ ಪ್ರತ್ಯೇಕ ಕಣ!
ಬರುವ ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಅನ್ಸಾರಿ ಬಣ ಪ್ರತ್ಯೇಕವಾಗಿ ಕಣಕ್ಕಿಳಿಯಲು ತೆರೆಮರೆಯ ಸಿದ್ಧತೆ ನಡೆಸುತ್ತಿದೆ.
ಸ್ವತಂತ್ರ ಸತ್ವ: ಕಾಂಗ್ರೆಸ್ ಅಧಿಕೃತ ಬ್ಯಾನರ್ ಇಲ್ಲದೆಯೂ ತಮ್ಮ ಮತಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅನ್ಸಾರಿ ಪಡೆಗಿದೆ.
ರಾಜ್ಯಕ್ಕೇ ಸಂದೇಶ: ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನ್ಸಾರಿ ಬಣ ಪ್ರತ್ಯೇಕವಾಗಿ ಸ್ಪರ್ಧಿಸುವ ಮೂಲಕ ಇಡೀ ರಾಜ್ಯಕ್ಕೆ ತಮ್ಮ ನೈಜ ಮತ ಶಕ್ತಿಯ ಅರಿವು ಮೂಡಿಸಲು ಗೇಮ್ ಪ್ಲಾನ್ ರೂಪಿಸಿದೆ.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೆಣೆದಿರುವ ಈ ಆಂತರಿಕ ಕದನ ಹಾಗೂ ಕಡೆಗಣನೆಯ ರಾಜಕಾರಣ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತೊಮ್ಮೆ ಧೂಳೀಪಟಗೊಳಿಸಿದರೆ ಆಶ್ಚರ್ಯವಿಲ್ಲ.












