11/02/2026 9:01 AM Total Views: 107203

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಹೊಸಪೇಟೆ: ಈ ನಾಡಿನ ಯಾವ ಮೂಲೆಯಲ್ಲಿ ನೋಡಿದರೂ ಸರಿ, ಅಲ್ಲಿ ಲಂಚದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಜನ ಬೆವರು ಸುರಿಸಿ ಕೆಲಸ ಮಾಡಿದರೂ, ಅವರ ನ್ಯಾಯಯುತ ಹಕ್ಕನ್ನು ಪಡೆಯಲು ಮತ್ತಷ್ಟು ಬೆವರು ಸುರಿಸಬೇಕು. ಇನ್ನು ಕೆಲವೊಮ್ಮೆ ರಕ್ತವನ್ನೇ ಹರಿಸಬೇಕು! ವಿಜಯನಗರದ ಹೊಸಪೇಟೆಯ PWD ಕಚೇರಿಯಲ್ಲಿ ನಡೆದ ಘಟನೆ ಈ ಸತ್ಯಕ್ಕೆ ಹಿಡಿದ ಕನ್ನಡಿ.
ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರ ಪ್ರಾಮಾಣಿಕವಾಗಿ ಸರ್ಕಾರಿ ಕೆಲಸವನ್ನು ಮುಗಿಸಿದ್ದ. ಆತನಿಗಾಗಿಯೇ ಮೀಸಲಾದ ಹಣವನ್ನು ಬಿಡುಗಡೆ ಮಾಡಲು ಇಲ್ಲಿನ ದೇವತಾ ಮನುಷ್ಯರು – ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ – ಒಂದು ಲಕ್ಷ ರೂಪಾಯಿಗಳ ಬೇಡಿಕೆಯಿಟ್ಟಿದ್ದರು. ಇವರ ಕಣ್ಣುಗಳಲ್ಲಿ ಕಂಡಿದ್ದು ಸೇವೆ ಅಲ್ಲ, ಬದಲಿಗೆ ಹಸಿವು. ಹಣದ ಹಸಿವು!
ಆದರೆ, ಪ್ರತಿ ಭ್ರಷ್ಟನ ಅಂತ್ಯಕ್ಕೆ ಒಂದು ದಿನ ಇದ್ದೇ ಇರುತ್ತದೆ. ಮಹೇಶ್ ಹಲಗೇರಿ ಎಂಬ ಆ ‘ಬುದ್ಧಿವಂತ’ ಲಂಚ ನೀಡಲು ಇಚ್ಛಿಸದೆ, ಲೋಕಾಯುಕ್ತರ ಮೊರೆ ಹೋಗಿದ್ದಾರೆ. ಈ ಭ್ರಷ್ಟರು ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಲಕ್ಷ ಲಕ್ಷ ಹಣ ಕಕ್ಕುವ ಈ ಅಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿ ಲಂಚ ಅಂದರೆ ಏನು? ಅದೊಂದು ಸಣ್ಣ ತಿಂಡಿಯಷ್ಟೇ! ಆದರೆ ಈ ತಿಂಡಿ ಈಗ ಅವರನ್ನ ಜೈಲಿನ ದಾರಿ ಹಿಡಿಸಿದೆ. ಈ ದೇವದಾಸ್ ಮತ್ತು ಮಾರುತಿ ಎಂಬ ವ್ಯಕ್ತಿಗಳು ಕಂಬಿ ಹಿಂದೆ ಹೋಗಿರಬಹುದು. ಆದರೆ, ಇವರಂತಹ ಭ್ರಷ್ಟ ಅಧಿಕಾರಿಗಳು ಇನ್ನೆಷ್ಟು ಕಚೇರಿಗಳಲ್ಲಿ ಕುಳಿತು ಜನರನ್ನು ಸುಲಿಗೆ ಮಾಡುತ್ತಿದ್ದಾರೆ? ವ್ಯವಸ್ಥೆಯ ಈ ಕೊಳಕು ತೊಲಗುವುದು ಯಾವಾಗ? ನಾವು ಕೇವಲ ಸುದ್ದಿ ಓದಿ ಮಲಗಿದರೆ, ಈ ದುರ್ನಾತ ನಿಲ್ಲುವುದಿಲ್ಲ.










