10/02/2026 9:40 AM Total Views: 100848

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಚೈತನ್ಯ ಟೆಕ್ನೋ. ವಿದ್ಯಾನಿಕೇತನ.
ಕಿಷ್ಕಿಂಧ ಶಾಲೆಯ ಹಾದಿಯಲ್ಲಿ ರಕ್ತದ ಕಲೆ: ಮೂರು ಶಾಲೆಗಳ ಪ್ರತಿಷ್ಠೆಗೆ ಬಲಿಯಾದನೇ ಅಪ್ಪ?
ಗಂಗಾವತಿ: ಆ ಪುಟ್ಟ ಕಂದಮ್ಮನ ಕಣ್ಣಲ್ಲಿ ಇನ್ನೂ ಆ ಭೀಕರತೆಯ ನೆರಳು ಹಾಗೆಯೇ ಇದೆ. ತನ್ನಪ್ಪನ ಬೆನ್ನಿಗೆ ಅಂಟಿಕೊಂಡು ಹೋದ ಮಗು ಈಗ ಅನಾಥ ಪ್ರಜ್ಞೆಯಲ್ಲಿ ನಲುಗುತ್ತಿದೆ. ಚೈತನ್ಯ ಟೆಕ್ನೋ ಶಾಲೆಯ ಆ ತಿರುವು ಇದೆಯಲ್ಲ, ಅಲ್ಲಿ ಸಾವಿನ ನೆರಳು ಯಾವತ್ತೂ ಹೊಂಚು ಹಾಕಿ ಕುಳಿತಿರುತ್ತದೆ ಅನ್ನೋದಕ್ಕೆ ಇವತ್ತಿನ ಈ ರಕ್ತಸಿಕ್ತ ಘಟನೆಯೇ ಸಾಕ್ಷಿ.
ಏನಾಯ್ತು ಅಲ್ಲಿ?
ಅದು ಎಂದಿನಂತೆ ವಾಹನಗಳ ಅಬ್ಬರದಿಂದ ಕೂಡಿದ್ದ ರಸ್ತೆ. ಹನುಮಂತಪ್ಪ ತಂದೆ ಬಸಪ್ಪ ಅನ್ನೋ ವ್ಯಕ್ತಿ ತನ್ನ ಎಕ್ಸೆಲ್ ಸೂಪರ್ ಬೈಕ್ ಮೇಲೆ ಮೂರು ವರ್ಷದ ಮುಗ್ಧ ಮೊಮ್ಮಗಳನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಕಿಷ್ಕಿಂಧಾ ಕಾಲೇಜಿನ ಮುಂಭಾಗದಲ್ಲಿ ಎದುರಿಗೆ ಬಂದ ಬೈಕ್ ಅಪ್ಪಳಿಸಿದ ರಭಸಕ್ಕೆ ಕಾಲವೇ ಸ್ತಬ್ದವಾಗಿತ್ತು. ಮಗು ಪವಾಡಸದೃಶವಾಗಿ ಬಚಾವಾಗಿದೆ ನಿಜ, ಆದರೆ ಆ ತಂದೆಯ ಸ್ಥಿತಿ? ತಲೆಗೆ ಬಲವಾದ ಪೆಟ್ಟು ಬಿದ್ದು, ಸಾವು-ಬದುಕಿನ ನಡುವೆ ಆತ ನಡೆಸುತ್ತಿರುವ ಹೋರಾಟ ನೋಡಿದರೆ ಕಲ್ಲೆದೆಯವನೂ ಕಣ್ಣೀರು ಹಾಕಬೇಕು.


ಅಹಂಕಾರದ ನಡುವೆ ನಲುಗಿದ ಸುರಕ್ಷತೆ


ಇಲ್ಲಿ ಅಸಲಿ ವಿಷಾದ ಇರೋದೇ ಬೇರೆ ಕಡೆ. ಚೈತನ್ಯ ಟೆಕ್ನೋ ಶಾಲೆ, ಕಿಷ್ಕಿಂಧಾ ಶಾಲೆ, ಮತ್ತು ವಿದ್ಯಾನಿಕೇತನ… ಈ ಮೂರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಒಂದೇ ಸಾಲಿನಲ್ಲಿವೆ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಈ ಶಾಲೆಗಳ ಆಡಳಿತ ಮಂಡಳಿಗಳಿಗೆ ಒಂದು ಸಣ್ಣ “ಬ್ಯಾರಿಕೇಡ್” ಹಾಕುವ ವಿಚಾರದಲ್ಲಿ ಒಮ್ಮತವಿಲ್ಲ ಅಂದ್ರೆ ಏನನ್ನಬೇಕು?
ಹಿಂದೆ ಶಾಲಾ ಸಮಯದಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಿಸಲಾಗುತ್ತಿತ್ತು. ಆದರೆ ಈಗ? ಮೂಲಗಳ ಪ್ರಕಾರ, ಈ ಮೂರು ಶಾಲೆಗಳ ಆಡಳಿತ ಮಂಡಳಿಗಳ ನಡುವಿನ ಬಿನಾಭಿಪ್ರಾಯ ಮತ್ತು ಪ್ರತಿಷ್ಠೆಯ ಜಗಳದಿಂದಾಗಿ ಬ್ಯಾರಿಕೇಡ್‌ಗಳು ನಾಪತ್ತೆಯಾಗಿವೆ. ರಸ್ತೆಯಲ್ಲಿ ವಾಹನಗಳು ಗುಂಡಿನಂತೆ ನುಗ್ಗುತ್ತಿವೆ.
ಪೋಷಕರ ಸಂಕಟ ಕೇಳುವವರ್ಯಾರು?
ಒಂದೆಡೆ “ಸಮಯಕ್ಕೆ ಸರಿಯಾಗಿ ಶಾಲೆಗೆ ಬರಲೇಬೇಕು” ಎನ್ನುವ ಪ್ರಾಂಶುಪಾಲರ ಕಟ್ಟುನಿಟ್ಟಿನ ಆದೇಶ. ಇನ್ನೊಂದೆಡೆ ಕೊಪ್ಪಳ-ರಾಯಚೂರು ಮುಖ್ಯ ರಸ್ತೆಯಲ್ಲಿ ಮೃತ್ಯುವಿನಂತೆ ಓಡಾಡುವ ವಾಹನಗಳು. ಮಗುವನ್ನು ಶಾಲೆಗೆ ಬಿಟ್ಟು ಬರುವವರೆಗೆ ಪಾಲಕರ ಎದೆಯಲ್ಲಿ ಢವಢವ ಎನ್ನುವ ತಳಮಳ.
ಹಲೋ ಮ್ಯಾನೇಜ್‌ಮೆಂಟ್‌ನವರೇ... ನಿಮ್ಮ ಒಳಗಿನ ಕಿತ್ತಾಟಕ್ಕೆ ಆ ಬಡಪಾಯಿ ಹನುಮಂತಪ್ಪನ ರಕ್ತ ಸಾಕ್ಷಿಯಾಗಬೇಕಿತ್ತೇ? ಇನ್ನು ಮುಂದಾದರೂ ಆ ಮೊಂಡುತನ ಬಿಟ್ಟು, ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸಿ. ಇಲ್ಲದಿದ್ದರೆ ಆ ತಿರುವಿನಲ್ಲಿ ಬೀಳುವ ಪ್ರತಿ ರಕ್ತದ ಹನಿಗೂ ನೀವೇ ಉತ್ತರಿಸಬೇಕಾಗುತ್ತದೆ!










